Skip to content
saarathilive

saarathilive

Your brand our Voice

  • Home
  • Our Channel
  • Services
  • E-store
  • News
  • About

ಬದುಕ ಬವಣೆಗಿದು ನಿತ್ಯದ ಉಡಿ… “ಚೋಮನ ದುಡಿ” – ನಾಟಕ”

Posted on March 17, 2025March 17, 2025 By Saarathi Live No Comments on ಬದುಕ ಬವಣೆಗಿದು ನಿತ್ಯದ ಉಡಿ… “ಚೋಮನ ದುಡಿ” – ನಾಟಕ”
Local News, News
Spread the love

ಇತ್ತೀಚೆಗೆ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ರಂಗಾಯಣ ಶಿವಮೊಗ್ಗ ಮತ್ತು ನಮ್ ಹಳ್ಳಿ ಥಿಯೇಟರ್ ನಿಂದ ಆಯೋಜಿತವಾದ ನಾಟಕ ಚೋಮನ ದುಡಿ. ಇದನ್ನು ಅಭಿನಯಿಸಿದವರು ಬೈಂದೂರಿನ ಸುರಭಿ ನಾಟಕ ತಂಡ.

ಚೋಮನದುಡಿ ಸಿನಿಮಾವಾಗಿ ನೋಡಿದ್ದರೂ ಅದು ನಾಟಕವಾಗಿ ನೋಡುವ ಮಜವೇ ಬೇರೆ. ಸಿನಿಮಾಗಿಂತಲೂ ನಾಟಕ ಭಿನ್ನ. ಅದರಲ್ಲೂ ಕಾರಂತರ ಕಾದಂಬರಿಯೊಂದು ಸಿನಿಮಾವಾಗಿ, ನಾಟಕವೂ ಆಗಿ ಮೂಡಿ ಬಂದಾಗ ಅದರ ಮೇಲಿದ್ದ ನಿರೀಕ್ಷೆ ಅಪಾರ. ಅದರಂತೆ ಸಿನಿಮಾ ಗೆದ್ದಿತ್ತು, ಈಗ ಸುರಭಿ ಬೈಂದೂರು ಅಭಿನಯಿಸಿದ ನಾಟಕವು ಗೆದ್ದಿತು. ಚೋಮನದುಡಿ ನಾಟಕವು ಜಾತಿ ವ್ಯವಸ್ಥೆಯ ಅಸ್ಪೃಶ್ಯತೆ, ಬಡತನ ಮತ್ತು ಸಾಮಾಜಿಕ ಅಸಮಾನತೆಗಳಂತಹ ಗಂಭೀರ ವಿಷಯಗಳನ್ನು ಎತ್ತಿ ತೋರಿಸುತ್ತದೆ. ಈ ನಾಟಕವು ಅಂದಿನ ಸಮಾಜದಲ್ಲಿ ದಲಿತರು ಅನುಭವಿಸುತ್ತಿದ್ದ ನೋವು, ಸಂಕಟ ಮತ್ತು ಶೋಷಣೆಯನ್ನು ಮನಮುಟ್ಟುವಂತೆ ಚಿತ್ರಿಸುತ್ತದೆ. ಪ್ರೇಕ್ಷಕರಲ್ಲಿ ಸಾಮಾಜಿಕ ಅರಿವು ಮತ್ತು ಸಂವೇದನೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.

ಚೋಮನದುಡಿ ಎಂಬ ಈ ನಾಟಕದ ಕಥಾನಾಯಕನೇ ಚೋಮ ಮತ್ತು ಅವನ ದುಡಿ. ಅವನ ಕಷ್ಟ ಸುಖಗಳಲ್ಲಿ ನೋವು ನಲಿವುಗಳಲ್ಲಿ ಅವನೊಂದಿಗೆ ಇದ್ದಿರುವುದೇ ಅವನ ದುಡಿ. ಹಾಗಾಗಿ ಚೋಮನ ಪಾತ್ರ ಪರಿಚಯ ಆರಂಭವೇ ಅದ್ಭುತವಾಗಿ ಈ ನಾಟಕದಲ್ಲಿ ಮೂಡಿಬಂದಿತು. ದಲಿತರ ಸಂಕೇತವಾಗಿ ನಿಲ್ಲುವ ಪಾತ್ರವಾದ ಚೋಮ ನಾಟಕದಲ್ಲಿ ಅವನ ಆಸೆ ಕನಸುಗಳು ಅದನ್ನು ತನ್ನ ಯಜಮಾನರ ಮುಂದೆ ಬೇಡಿಕೊಳ್ಳುವ ರೀತಿ, ಅಚಲವಾದ ನಂಬಿಕೆ, ವಿಶ್ವಾಸವನ್ನು ಇಟ್ಟುಕೊಂಡೆ ಪದೇ ಪದೇ ಕೇಳುವುದು ಮತ್ತು ನಿರಾಸೆಯಾದಾಗ ಅಭಿನಯಿಸಿದ ರೀತಿ ಎಲ್ಲವೂ ಅನ್ಯಾದೃಶ. ಸತ್ಯನಾ ಕೊಡೇರಿ ಅವರ ಅಭಿನಯವಂತು ಪ್ರೇಕ್ಷಕರ ಮನದಾಳಕ್ಕಿಳಿದು ನಿಲ್ಲುವಲ್ಲಿ ಯಶಸ್ವಿಯಾಯಿತು. ತಾನು ಬೇಸಾಯಗಾರನಾಗಬೇಕೆಂಬ ಹಠಕ್ಕೆ ಬಿದ್ದ ಚೋಮದು ತನ್ನ ಮಕ್ಕಳನ್ನು ಕಳೆದುಕೊಳ್ಳುತ್ತಾ ಹೋದರೂ ತಾನು ಸಾಕಿದ ಎತ್ತುಗಳನ್ನು ಬಿಡಲು ತಯಾರಿರಲ್ಲದ ಮನಸ್ಥಿತಿ. ಅವನ ಮಗನಾದ ನೀಲಾ ಸಾಯುವ ದಿನದ ದೃಶ್ಯಗಳಲ್ಲಿ ಅಂತೂ ಸಾವಿಗೆ ಜಾತಿ ಧರ್ಮಗಳ ಭೇದವಿಲ್ಲದಿದ್ದರೂ ಅಸ್ಪೃಶ್ಯತೆ ಅವನ ಕೊನೆಗೆ ಕಾರಣವಾಯಿತು ಎನ್ನುವಾಗ ನೋಡುಗರ ಮನ ಕಲುಕುವ ಅಭಿನಯವನ್ನು ತಂಡ ನೀಡಿತ್ತು.

ಬಹು ಮುಖ್ಯವಾಗಿ ‘ಅವರಿಗೆಲ್ಲ ಸಿಗುವುದು ನನಗ್ಯಾಕೆ ಸಿಗಲ್ಲ? ಕೇಳ್ತೀನಿ, ಅಂತ ತನ್ನ ಅಸಮಾನತೆಯ ವಿರುದ್ಧವಾಗಿ ಚೋಮನಾಡುವ ಮಾತುಗಳು, ಕರಿ ನಾಯಿ ಯಾವತ್ತೂ ಬಿಳಿ ನಾಯಿ ಆಗಲ್ಲ ಎಂದು ಅಪ್ಪನನ್ನು ಸಂತೈಸುವ ಬೆಳ್ಳಿಗೆ ಕರಿನಾಯಿ ಏನು ತಿನ್ನತ್ತೋ ಅದನ್ನೇ ಬಿಳಿ ನಾಯಿ ತಿನ್ನುತ್ತೆ ಎಂದು ಉತ್ತರಿಸುವ ಚೋಮ ಈ ಸನ್ನಿವೇಶಗಳು ಅಚ್ಚಳಿಯದೇ ನೋಡುಗನ ಮನದಲ್ಲಿ ಉಳಿದುಬಿಡುತ್ತದೆ. ಹಾಗಾಗಿ ಚೋಮನ ಪಾತ್ರಕ್ಕಂತೂ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ ಶ್ರೀ ಸತ್ಯನಾ ಕೊಡೇರಿ ಅವರು.

ಅದರಂತೆ ಬೆಳ್ಳಿಯ ಪಾತ್ರವು ಸಹ ನೆನಪಿನಲ್ಲಿ ಉಳಿಯುವ ಪಾತ್ರ. ಅಪ್ಪನನ್ನು ಸಂತೈಸುವಾಗ, ಮನೆ ನಿಭಾಯಿಸುವಾಗ, ಸಾಲ ತೀರಿಸಲು ತಾನೆ ಹೋಗಿ, ಸಾಲ ತೀರಿಸಿ ಸಾಮಾಜಿಕ ವ್ಯವಸ್ಥೆಯ ಕಟ್ಟುಪಾಡಿನಲ್ಲಿ ಪುರುಷನ ಕಾಮ ತೃಶಗೆ ಅವಳು ಬಲಿಯಾಗುವ ಎಲ್ಲಾ ಸನ್ನಿವೇಶಗಳಲ್ಲೂ ನೈಜ ಅಭಿನಯದಿಂದಲೇ ನೆನಪಿನಲ್ಲಿ ಉಳಿದಿದ್ದಾಳೆ ಬೆಳ್ಳಿ ಪಾತ್ರಧಾರಿ ಕಾವೇರಿ.

ಇನ್ನು ಉಳಿದ ಪಾತ್ರಗಳಾದ ಚೋಮನ ಗಂಡು ಮಕ್ಕಳು, ಸಂಕಪ್ಪಯ್ಯನವರು, ಸೇರಿಗಾರನಾದ ಮನ್ವೇಲು ಪಾತ್ರಧಾರಿ ಸುಧಾಕರ ಬೈಂದೂರು ಸೇರಿದಂತೆ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇದಕ್ಕೆ ಜೊತೆಯಾಗಿ ನಿಂತಿದ್ದು ಅವರು ಬಳಸಿಕೊಂಡ ರಂಗ ಪರಿಕರಗಳು. ಅದು ಗುಡಿಸಲಿನ ದೃಶ್ಯವಾಗಿರಬಹುದು ಅಥವಾ ಸಂಕಪ್ಪಯ್ಯನವರ ಮನೆಯ ದೃಶ್ಯಗಳಾಗಿರಬಹುದು ಎಲ್ಲವೂ ಆ ಕಾಲದ ಚಿತ್ರಣ ಕಣ್ಣಿಗೆ ಕಟ್ಟುವಂತಿತ್ತು. ಜಾತಿ ವ್ಯವಸ್ಥೆಯ ಕುರಿತಾಗಿ ಅಸ್ಪೃಶ್ಯತೆ ಮತ್ತು ಅದನ್ನೇ ಚೆನ್ನಾಗಿ ತೋರಿಸುವಂತೆ ನಾಟಕದ ಕೊನೆಯ ದ್ರಶ್ಯದಲ್ಲಿ ಸಮಾಜವೇ ಜಾತಿ ಹೆಸರಿನಲ್ಲಿ ದಲಿತರನ್ನು ಕಟ್ಟಿ ಹಾಕಿದೆ ಎಂದು ತೋರಿಸುವುದಕ್ಕಾಗಿ ಬೇಲಿಯನ್ನು ಬಳಸಿದ ರೀತಿ ಅಂತೂ ಬಹು ಸೊಗಸಾಗಿ ಮೂಡಿಬಂದಿತು.

ಶ್ರೀ ಗಣೇಶ್ ಮಂದಾರ್ತಿ ಅವರ ನಿರ್ದೇಶನ, ಬೈಂದೂರಿನ ಸುರಭಿ ತಂಡದ ಎಲ್ಲರ ನೈಜ ಅಭಿನಯ, ಅದಕ್ಕೆ ಪೂರಕವಾದ ಸಂಗೀತ, ಸಾಂಕೇತಿಕವಾಗಿ ಎಲ್ಲವನ್ನು ಹೇಳುತ್ತಿರುವ ರಂಗಸಜ್ಜಿಕೆ, ವಿಕ್ರಮ್ ಉಪ್ಪುಂದ ಅವರ ಮುಖವರ್ಣಿಕೆ, ಪ್ರತಿಯೊಂದು ಸಹ ಅದ್ಭುತ. ನಾಟಕದ ಸಂಭಾಷಣೆಗಳು ಸಂಗೀತ ಮತ್ತು ರಂಗ ವಿನ್ಯಾಸ, ಕಥೆಯ ಭಾವನಾತ್ಮಕಥೆಯನ್ನು ಹೆಚ್ಚಿಸುತ್ತಿತ್ತು. 20ನೇ ದಶಕದ ಕಥೆ ಹೆಣೆದ ಕಾರಂತರು, ಎಂದಿಗೂ ಆ ಕಥೆ ಮತ್ತು ಅದರ ಸಂಭಾಷಣೆಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತಿದೆ. ಚೋಮನ ದುಡಿ ನಾಟಕ ಸಾಮಾಜಿಕ ಬದಲಾವಣೆಗೆ ಪ್ರೇರಣೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದೆ.

ಸಂಭಾಷಣೆ ಹಳ್ಳಿಯ ಶೈಲಿಯಲ್ಲಿ ಮತ್ತು ನೈಜ ಜೀವನಕ್ಕೆ ಹೊಂದಿಕೊಂಡಂತೆ ಮೂಡಿಬಂದಿವೆ. ಅಲ್ಲಿನ ಪಾತ್ರಗಳು ಮಾತನಾಡುವ ರೀತಿ, ಅವರ ಆಕ್ರೋಶ, ದುಃಖ, ಹತಾಶೆ ಎಲ್ಲವೂ ನೈಜತೆಗೆ ತುಂಬಾ ಹತ್ತಿರವಿದ್ದಂತೆ ಇತ್ತು. ಈ ಎಲ್ಲಾ ಅಂಶಗಳು ಪ್ರೇಕ್ಷಕನ ಮನಸ್ಸಿನಲ್ಲಿ ತೀವ್ರ ಭಾವನಾತ್ಮಕ ಪ್ರಭಾವ ಬೀರುವಂತಹದ್ದಾಗಿತ್ತು. ಈ ನಾಟಕ ಶೋಷಿತ ವರ್ಗದ ಜೀವನ ಸಂಕಟಗಳನ್ನು ವಿಶ್ಲೇಷಿಸುವ ಪ್ರಯತ್ನವಾಗಿದ್ದು, ಇದರ ಕಠೋರ ವಾಸ್ತವಿಕತೆ ಮತ್ತು ಶಕ್ತಿಯುತ ನಟನೆಗಳು, ಪ್ರೇಕ್ಷಕರಲ್ಲಿ ಆಳವಾದ ಪರಿಣಾಮ ಬೀರುತ್ತದೆ. ಇದೊಂದು ಕಲಾತ್ಮಕತೆಯ ಜೊತೆಗೆ ಸಾಮಾಜಿಕ ಅಂತರಂಗವನ್ನು ಎಲ್ಲರಿಗೂ ತಲುಪಿಸುವ ಪರಿಣಾಮಕಾರಿ ನಾಟಕವಾಗಿದ್ದು ಈ ನಾಟಕವನ್ನು ಆಯೋಜಿಸಿದ ಎಲ್ಲರಿಗೂ ಕೂಡ ಧನ್ಯವಾದಗಳು.

ಡಾ. ಮೈತ್ರೇಯಿ ಆದಿತ್ಯಪ್ರಸಾದ್
ಸಂಸ್ಕೃತ ಉಪನ್ಯಾಸಕರು,
ಪೇಸ್ ಕಾಲೇಜ್ ಶಿವಮೊಗ್ಗ.
ಚಿತ್ರಕೃಪೆ : ಆದಿತ್ಯ ಪ್ರಸಾದ್ ಎಂ.

Post navigation

❮ Previous Post: ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವ ಸಮಿತಿಯಿಂದ ಪ್ರಮುಖರೊಂದಿಗೆ ಮಾತುಕತೆ
Next Post: ಕವಿ ಕಂಡ ಯುಗಾದಿ-2025 ಕವನ ಸಂಕಲನ ಬಿಡುಗಡೆ:ಸಾಹಿತ್ಯದ ಮೂಲಕ ಸಂಸ್ಕೃತಿ ಮಹತ್ವ ಸಾರಬೇಕು: ಎಸ್.ಎನ್. ಚನ್ನಬಸಪ್ಪ(ಚೆನ್ನಿ) ❯

You may also like

News
0xc79c1e07
August 1, 2025
Local News
“12-02-2025 ಬುಧವಾರ, ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಶತಾವಧಾನಿ ಆರ್. ಗಣೇಶ್ ಕಾರ್ಯಕ್ರಮ”
February 11, 2025
Local News
ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವ ಸಮಿತಿಯಿಂದ ಪ್ರಮುಖರೊಂದಿಗೆ ಮಾತುಕತೆ
March 1, 2025
News
0x1c8c5b6a
August 3, 2025

Leave a Reply Cancel reply

Your email address will not be published. Required fields are marked *

Recent Posts

  • 0xbbb01019
  • 0x1c8c5b6a
  • 0x1c8c5b6a
  • 0x1c8c5b6a
  • 0xc79c1e07

Recent Comments

  1. Chethan S. on ಆತ್ಮೀಯವಾದ ಆಮಂತ್ರಣ – ಸಹಚೇತನ ನಾಟ್ಯಾಲಯ (ರಿ.), ಶಿವಮೊಗ್ಗ

Archives

  • October 2025
  • September 2025
  • August 2025
  • May 2025
  • April 2025
  • March 2025
  • February 2025
  • January 2025

Categories

  • International news
  • Local News
  • National News
  • News
  • Promotions
  • Home
  • Our Channel
  • Services
  • E-store
  • News
  • About

Copyright © 2025 saarathilive.

Theme: Oceanly News by ScriptsTown

Go to mobile version